ಕವಿಕಲೆ

ಜನಸಾಮಾನ್ಯರು ಹಬ್ಬ ಆಚರಣೆಗಳ ಸಂದರ್ಭದಲ್ಲಿ ಮನೆ, ಮಠ, ಮಾಡು, ದೇವಾಲಯಗಳ ಮೇಲ್ಫಾವಣಿ, ಗೋಡೆಗಳ ಒಳಬದಿ ಹಾಗೂ ಹೊರಬದಿಗಳಿಗೆ, ಕಾವಿಹಿಟ್ಟಿನಿಂದ ಸಿದ್ಧಪಡಿಸಿದ ಬಣ್ಣದಿಂದ ಚಿತ್ತಾರ ಬಿಡಿಸುವ ಒಂದು ಜನಪದಕಲೆ; ಕರ್ನಾಟಕದ ಸಾಂಪ್ರದಾಯಿಕ ಕಲೆಗಳಲ್ಲಿ ಒಂದು. ಕ್ರಿ.ಪೂ.1500ರಲ್ಲಿ ಈಜಿಪ್ಟ್ ದೇಶದಲ್ಲಿ ಸತ್ತವರ ಸಮಾಧಿಗಳ ಮೇಲೆ (ಪಿರಮಿಡ್) ಕಾವಿಕಲೆಯ ಚಿತ್ರಗಳನ್ನು ರಚಿಸುತ್ತಿದ್ದರು. ಇದಲ್ಲದೆ ಎಟ್ರುಸ್ಕನ್ ಜನಾಂಗದವರು ತಮ್ಮ ಗುಹೆಗಳಲ್ಲಿ ಮೃತಪಟ್ಟವರ ನೆನಪಿಗಾಗಿ ಕಾವಿಬಣ್ಣದಿಂದ ಚಿತ್ರಬಿಡಿಸಿದರೆ, ಗ್ರೀಕ್ ಮತ್ತು ರೋಮನ್ನರು ತಮ್ಮ ಪಾತ್ರೆ-ಪರಡೆಗಳ ಮೇಲೆ ಪೌರಾಣಿಕ ಸನ್ನಿವೇಶದ ಚಿತ್ರಗಳನ್ನು ಕೆಂಬಣ್ಣದಿಂದಲೇ ಚಿತ್ರಿಸುತ್ತಿದ್ದರು. ಜರ್ಮನಿಯ ಸಂಶೋಧಕರಾದ ಗ್ರೀಟ್ಲಿಮಿಟರ್ ಭಾರತದಲ್ಲಿ ಗೋವದಲ್ಲಿ ಕಾವಿಕಲೆಯನ್ನು ಅಭ್ಯಸಿಸುವಾಗ, ಈ ಕಲೆ ಮೂಲತಃ ಇಟಲಿಯ ಗ್ರಾಫಿಕ್ (ರೇಖಾಚಿತ್ರ) ಕಲೆಯಾಗಿದ್ದು, ಪೆÇೀರ್ಚುಗೀಸರು ಭಾರತಕ್ಕೆ ಬಂದಾಗ ತಮ್ಮೊಡನೆ ಈ ಕಲೆಯನ್ನು ತಂದರು ಎಂದು ಅಭಿಪ್ರಾಯಪಟ್ಟಿದ್ದಾರೆ.

	ಗೌಡ ಸಾರಸ್ವತರೆಂದು ಗುರುತಿಸಿಕೊಂಡಿರುವ ಕೊಂಕಣಿ ಭಾಷಿಕರು ಗೋವ ಮತ್ತು ಕರ್ನಾಟಕದ ಕರಾವಳಿಯಲ್ಲಿ ನೆಲೆಸಿದ್ದರು. ಇವರು ಕರಾವಳಿಯ ಜೀವನಕ್ಕೆ ಒಗ್ಗಿಕೊಂಡು ತಮ್ಮ ಪ್ರಾಂತೀಯ ದೈವಗಳಾದ ಶಾಂತದುರ್ಗ ಮಂಗೇಶ, ಮ್ಹಾಳಸಾ, ನಾಗೇಶ, ರಾಮನಾಥ, ರವಳನಾಥ, ದಾಮೋದರ, ನರಸಿಂಹ, ಸಪ್ತಕೋಟೇಶ್ವರ, ಮಹಾಮಾಯಿ -ಹೀಗೆ ದೇವಾಲಯಗಳನ್ನು ನಿರ್ಮಿಸಿ ತಮ್ಮ ಸಂಸ್ಕøತಿ ಅಭಿರುಚಿಗೆ ತಕ್ಕಂತೆ ಈ ಮಂದಿರಗಳನ್ನು ಕಾವಿಚಿತ್ರಗಳಿಂದ ಅಲಂಕರಿಸಿದರು. ಕರಾವಳಿ ಪ್ರದೇಶಗಳನ್ನು ಆಳುತ್ತಿದ್ದ ರಾಜಮಾಂಡಲಿಕರು ಹೊನ್ನಾವರ, ಭಟ್ಕಳ, ಬಸರೂರು, ಬಾರಕೂರು, ಬ್ರಹ್ಮಾವರ, ಮೂಲ್ಕಿ, ಮಂಗಳೂರು, ಉಲ್ಲಾಳ ಮುಂತಾದ ಕಡೆ ಕೊಂಕಣಿಗರಿಗೆ ಆಶ್ರಯನೀಡಿ, ದೇವಾಲಯಗಳ ಸ್ಥಾಪನೆಗೆ ಕಾರಣರಾದರು. ದೇವಾಲಯ ನಿರ್ಮಾಣದ ಸಂದರ್ಭದಲ್ಲಿ ಗೋವೆಯ ಸ್ಥಾನಿಕರಾದ ಗಾರೆಗಾರರು, ಗುಡಿಗಾರರು, ಪರಿಣತ ಶಿಲ್ಪಿಗಳನ್ನೆಲ್ಲ ಕೊಂಕಣಿಗರು ವಿಶ್ವಾಸದಿಂದ ಬರಮಾಡಿಕೊಂಡು, ದೇವಾಲಯಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ದೇವಾಲಯಗಳ ಹೊರಗೋಡೆ ಹಾಗೂ ಒಳಗೋಡೆಗಳಲ್ಲಿ ಕುಸ್ತಿಪಟುಗಳು, ಕಾಳಗ, ಪ್ರಕೃತಿಯಲ್ಲಿನ ಪ್ರಾಣಿಪಕ್ಷಿಗಳು, ದ್ವಾರಪಾಲಕರು, ಕುಲದೇವತೆಗಳು, ಮೊದಲಾದ ರೇಖಾಚಿತ್ರ ಹಾಗೂ ಜಾಮಿತಿ ಚಿತ್ರಗಳನ್ನು ರಚಿಸುತ್ತ ಬಂದರು. ಈ ಚಿತ್ರಗಳಲ್ಲಿ ಕರ್ನಾಟಕದ ಭಿತ್ತಿ ಚಿತ್ರಗಳ ಸಾಮ್ಯ ಹೊಂದಿದ್ದು ರಾಮಾಯಣ, ಮಹಾಭಾರತ, ಭಾಗವತಗಳ ಸಾಮಾಜಿಕ ಸನ್ನಿವೇಶಗಳನ್ನು ಒಳಗೊಂಡಿವೆ. ಮೈಸೂರು ಒಡೆಯರ ಆಡಳಿತದ ಕಾಲದಲ್ಲಿ ಕಾವಿಚಿತ್ರಗಳು ಅಲಂಕಾರ ಸ್ಥಾನ ಪಡೆದಿದ್ದುವು. ಉತ್ತರ ಕನ್ನಡ ಜಿಲ್ಲೆಯ ಕುಮಟ, ಕಾರವಾರ, ಅಂಕೋಲ ಹಾಗೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕುಂದಾಪುರ, ಮಂಗಳೂರು ದೇವಾಲಯಗಳಲ್ಲಿ ಈ ಕಲೆ ಇನ್ನೂ ಜೀವಂತವಾಗಿದೆ.			  
(ಪಿ.ಜಿಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ